ಪ್ರಿಯವ್ರತ
	ಸ್ವಾಯಂಭುವ ಮನುವಿಗೆ ಶತರೂಪೆಯಲ್ಲಿ ಹುಟ್ಟಿದವ. ಉತ್ತಾನಪಾದ ರಾಜನ ಅಣ್ಣ. ವಿಶ್ವಕರ್ಮನ ಪುತ್ರಿ ಬರ್ಹಿಷ್ಮತಿ ಈತನ ಪತ್ನಿಯರಲ್ಲಿ ಒಬ್ಬಳು. ಈಕೆಗೆ ಅಗ್ನೀಧ್ರ ಇಧ್ಮ ಜಿಹ್ವ, ಯಜ್ಞಬಾಹು, ಮಹಾವೀರ, ಹಿರಣ್ಯರೇತ, ಘೃತಪೃಪ್ಠ, ಸವನ, ಮೇಥಾತಿಥಿ, ವೀತಿ ಹೋತ, ಕವಿ ಎಂಬ ಹತ್ತುಜನ ಗಂಡು ಮಕ್ಕಳೂ ಊರ್ಜಸ್ವತಿ ಎಂಬ ಒಬ್ಬ ಹೆಣ್ಣುಮಗಳೂ ಜನಿಸಿದರು. ಊರ್ಜಸ್ವತಿಯನ್ನು ಶುಕ್ರಾಚಾರ್ಯರಿಗೆ ಕೊಟ್ಟು ಮದುವೆ ಮಾಡಲಾಯಿತು. ಪ್ರಿಯವ್ರತನಿಗೆ ಕರ್ದಮ ಪ್ರಜಾಪತಿಯ ಪುತ್ರಿ ಕುಕ್ಷಿ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಆಕೆಗೆ ಅಗ್ನೀಧ್ರ, ಅಗ್ನಿಬಾಹು, ವಪುಷ್ಮಂತ, ದ್ಯುತಿಮಂತ, ಮೇಧಾ, ಮೇಥಾತಿಥಿ, ಭವ್ಯ, ಸವನ, ಪುತ್ರ, ಜ್ಯೋತಿಷ್ಮಂತರೆಂಬ ಹತ್ತು ಜನ ಗಂಡು ಮಕ್ಕಳೂ ಸಾಮ್ರಾಟ್ ಮತ್ತು ಕುಕ್ಷಿಯೆಂಬ ಇಬ್ಬರು ಪುತ್ರಿಯರೂ ಇದ್ದುದಾಗಿ ಭಾಗವತದಿಂದ ತಿಳಿದು ಬರುತ್ತದೆ. ಪ್ರಿಯವ್ರತನಿಗೆ ಉತ್ತಮ, ತಾಮಸ ಹಾಗೂ ರೈವತ ಎಂಬ ಬೇರೆ ಮೂವರು ಮಕ್ಕಳಿದ್ದು ಕಾಲಾಂತರದಲ್ಲಿ ಅವರು ಮನುಗಳಾದರು. ಪ್ರಿಯವ್ರತನ ಹೆಂಡತಿ ಬರ್ಹಿಷ್ಮತಿಯ ಬಗೆಗೆ ಪುರಾಣಗಳಲ್ಲಿ ಏಕಾಭಿಪ್ರಾಯವಿಲ್ಲ. ಈ ಪ್ರಿಯವ್ರತ ಒಮ್ಮೆ ಮೇರುಪರ್ವತವನ್ನು ಪ್ರದಕ್ಷಿಣೆ ಹಾಕಲು ಪ್ರಾರಂಭಿಸಿ ಸೂರ್ಯರಶ್ಮಿ ಬೀಳದ ಪಕ್ಕದಲ್ಲಿಯೆ ವಿಹರಿಸಿದನಂತೆ. ಆತನ ರಥಚಕ್ರದ ರೇಖೆಗಳಲ್ಲಿ ಸಪ್ತದ್ವೀಪಗಳು ಸಪ್ತಸಾಗರಗಳು ನಿರ್ಮಾಣಗೊಂಡವೆಂದೂ ಅವನ್ನು ಆತ ತನ್ನ ಮಕ್ಕಳಲ್ಲಿ ಹಂಚಿಕೊಟ್ಟನೆಂದೂ ಕಥೆ. 
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ